ನಾಗಪಟ್ಟಣಂ
ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ಒಂದು ರೇವು ಪಟ್ಟಣ. ಬಂಗಾಳ ಕೊಲ್ಲಿಯ ತೀರದಲ್ಲಿ ಮದರಾಸಿಗೆ 400 ಕಿ.ಮೀ. ದಕ್ಷಿಣಕ್ಕೆ ಇದೆ. ಜನಸಂಖ್ಯೆ 68,026 (1971). ಪ್ರಾಚೀನ ಕಾಲದಲ್ಲಿ ಗ್ರೀಸ್ ಮತ್ತು ರೋಮ್‍ಗಳೊಂದಿಗೆ ಇದು ವ್ಯಾಪಾರ ನಡೆಸುತ್ತಿತ್ತು. ಟಾಲಮಿ ತನ್ನ ಬರೆವಣಿಗೆಗಳಲ್ಲಿ ಇದನ್ನು ನಿಗಮೋಸ್ ಎಂದು ಕರೆದಿದ್ದಾನೆ. ಪೋರ್ಚುಗೀಸರೂ ಅನಂತರ ಡಚ್ಚರೂ ಇದನ್ನು ವಶಪಡಿಸಿಕೊಂಡಿದ್ದರು. 1781ರಲ್ಲಿ ಇದು ಇಂಗ್ಲಿಷರ ವಶವಾಯಿತು. ಮದರಾಸು ಬೆಳೆದ ಮೇಲೆ ಇದರ ಪ್ರಾಮುಖ್ಯ ತಗ್ಗಿತು. ಈಗ ಇದು ತಮಿಳುನಾಡಿನ ಮೂರನೇ ಬಂದರು. ಇದು ಅಷ್ಟೇನೂ ಆಳವಾದ ಬಂದರಲ್ಲ. ಈಚೆಗೆ ಈ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಂದ ಎಣ್ಣೆ ಬೀಜ, ಹತ್ತಿ, ರೇಷ್ಮೆ, ಬಟ್ಟೆ, ಚರ್ಮ ಮತ್ತು ಚಕ್ಕಳ, ಹೊಗೆಸೊಪ್ಪು, ಸಾಗುವಾನಿ ರಫ್ತಾಗುತ್ತವೆ. ಸಂಪದ್ಯುಕ್ತವಾದ ಕಾವೇರಿ ಮುಖಜಭೂಮಿ ಇದರ ಹಿನ್ನಾಡು, ಹಡಗು ರಿಪೇರಿ, ಉಕ್ಕು ಸಾಮಾನು, ಕೈಮಗ್ಗ ಮುಂತಾದ ಕೈಗಾರಿಕೆಗಳಿವೆ. ಮೀನುಗಾರಿಕೆಯೂ ಇಲ್ಲಿಯ ಜನರ ಮುಖ್ಯ ಕಸುಬು.		
		(ಕೆ.ವಿ.ಆರ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ